ನಾಯಿ ಮತ್ತು ಬೆಕ್ಕುಗಳ ಜಗಳ ನಮಗೆ ಹೊಸತೇನಲ್ಲ , ದಿನ ಬೆಳಗಾದರೆ ರಸ್ತೆಯಲ್ಲಿ ಇಲ್ಲ ಮನೆಯಲ್ಲಿ ಇವನ್ನು ನೋಡುತ್ತಲೇ ಇರುತ್ತೇವೆ. ಕೆಲವೊಮ್ಮೆ ಕೆಲವೊಬ್ಬರ ಜಗಳದ ದೃಷ್ಟಾಂತ ಕೊಡಲು "ನಾಯಿ - ಬೆಕ್ಕು ಜಗಳ " ಎಂಬ ಪದಗಳನ್ನು ಉಪಯೋಗಿಸುತ್ತೇವೆ.
ಇವತ್ತು ನಾನು ಇಲ್ಲಿ ಬರೆಯುತ್ತಿರುವ ಲೇಖನ ನನ್ನ ಬರವಣಿಗೆಯ ಮೋಜಿಗಾಗಿ ಅಲ್ಲದೆ ನನ್ನ ಇಲ್ಲಿಯ ತನಕ ಜೀವಮಾನದಲ್ಲಿ ಒಂದು ಮುದ್ದಾದ ಬೆಕ್ಕಿಗೆ ಒದಗಿದ ಭೀಕರ, ದುರಾದೃಷ್ಟದ ಸಾವಿನ ಬಗ್ಗೆ ತಿಳಿಸಲು ಇಷ್ಟಪಡುತ್ತೇನೆ .
ಸ್ವಲ್ಪ ತಿಂಗಳುಗಳ ಹಿಂದೆ ನಮ್ಮ ದೊಡ್ಡಮ್ಮನವರ ಮನೆಗೆ ಎರಡು ಮುದ್ದಾದ ಬೆಕ್ಕಿನ ಮರಿಗಳನ್ನು ತಂದರು. ಬೆಳ್ಳಗೆ, ಮೈ ತುಂಬಾ ಬಿಳಿಯ ಉದ್ದ ರೋಮ ಹೊಂದಿದ್ದ ಅವು ಮುಟ್ಟಲು ಹತ್ತಿಯ ಉಂಡೆಗಳಂತೆ ಇದ್ದವು, ನೋಡಲು ಎರಡು ಒಂದೇ ತರಹ ಇದ್ದವು, ಒಂದನ್ನು ಬಿಟ್ಟು ಇನ್ನೊಂದು ಎಲ್ಲಿಯೂ ಹೋಗುತ್ತಿರಲಿಲ್ಲ, ಊಟದಲ್ಲೂ ಸಹ ಒಟ್ಟಗೆ ಇರುತ್ತಿದ್ದವು. ಮರಿಗಳಾಗಿದ್ದ ಅವು ಸ್ವಲ್ಪ ಬೆಳೆದು ನೋಡಲು ಟುಮ್ಮು- ಟುಮ್ಮಾಗಿದ್ದವು.
ಈ ಘಟನೆ ನಡೆದಿದ್ದು ಮೊನ್ನೆಯ ದಿನ, ರಾತ್ರಿ ಊಟವಾದ ಮೇಲೆ ನಮ್ಮ ದೊಡ್ಡಮ್ಮನವರು ಮನೆಯ ಗೇಟ್ ತೆಗೆದು ಹೊರಗೆ ಹೋಗಿದ್ದಾರೆ. ಅವರ ಹಿಂದೆ ಎರಡರಲ್ಲಿ ಒಂದು ಬೆಕ್ಕು ಅವರ ಹಿಂದೆ ಹೋಗಿದೆ. ಇನ್ನು ಗೇಟ್ ತೆಗೆದು ಸ್ವಲ್ಪ ಸೆಕಂಡಿನಲ್ಲೇ ಎಲ್ಲಿಯೋ ಇದ್ದ ಐದು ನಾಯಿಗಳು ಒಟ್ಟಗೆ ಈ ಬೆಕ್ಕಿನ ಮೇಲೆ ಎರಗಿವೆ. ಅವುಗಳು ಕೋಪ, ಶಕ್ತಿ ಎಷ್ತಿತ್ತಂದರೆ ಎರಗಿದ ಮುಂದನೆಯ ಕ್ಷಣದಲ್ಲೇ ಒಂದು ನಾಯಿ, ಬೆಕ್ಕಿನ ಪೂರ್ಣ ಬಾಲವನ್ನು ಒಂದೇ ಏಟಿಗೆ ಸಂಪೂರ್ಣ ತುಂಡುಮಾಡಿ ಕಚ್ಚಿಕೊಂಡು ಓಡಿಹೋಯಿತು. ಇಷ್ಟೇ ಆಗಿದ್ದರೆ ಪರ್ವಾಗಿತ್ತ್ತಿಲ್ಲ , ಇನ್ನು ಇದರ ಮುಂದೆ ಹೋಗಿ ಮಿಕ್ಕ ನಾಲ್ಕು ನಾಯಿಗಳು ಬೆಕ್ಕಿನ ದೇಹವನ್ನು ನಾಲ್ಕು ತುಂಡು ಮಾಡಿ ಹರಿದುಹಾಕಿದ್ದವು. ಬೆಕ್ಕಿನ ಬೆಳ್ಳನೆಯ ತುಪ್ಪಳ ಕೆಂಪು ಬಣ್ಣಕ್ಕೆ ತಿರುಗಿತ್ತು, ನಾಲ್ಕು ನಾಯಿಗಳು ಒಂದೊಂದು ತುಂಡನ್ನು ತೆಗೆದುಕೊಂಡು ಮತ್ತಷ್ಟು ಚೂರು ಮಾಡಿದವು, ಇಷ್ಟೆಲ್ಲಾ ಆದದ್ದು ನಮ್ಮ ಕಣ್ಣುಗಳ ಮುಂದೆ ಅದೂ ರಸ್ತೆಯಲ್ಲಿ, ಐದು ನಿಮಿಷದ ಮುಂಚೆ ಇದ್ದ ನಮ್ಮ ಪ್ರೀತಿಯ ಬೆಕ್ಕು ಹರಿದು ಪಾಲಾಗಿತ್ತು, ಗೇಟಿನ ಮುಂದೆ ಇದ್ದ ನಮ್ಮ ದೊಡ್ದಮ್ಮನವರಿಗೆ ಅವರು ಕಿಟಾರೆಂದು ಕಿರುಚಿದದೊಂದು ಮಾತ್ರ ನೆನಪು. ಹೀಗೆ ಭೀಕರ ಸಾವಿಗೆ ಗುರಿಯಾದ ಆ ಬೆಕ್ಕು ಎಷ್ಟು ಸಂಕಟ ಪಟ್ಟು ಪ್ರಾಣ ಬಿಟ್ಟಿತ್ತೋ ಆ ಭಗವಂತನೇ ಬಲ್ಲ. ಅವತ್ತು ರಾತ್ರಿ ಮನೆಯಲ್ಲಿ ಯಾರು ಊಟವನ್ನು ಮಾಡಲಿಲ್ಲ, ಎಂದಿನಂತೆ ಇದ್ದ ಕೇಕೆಗಳು , ಟೀವಿಯ ಗಲಾಟೆ ಇತ್ತಿಲ್ಲ, ಆದರೆ ಒಂದು ಶಬ್ದ ಮಾತ್ರ ನಿಲ್ಲದೆ ಬರುತ್ತಿತ್ತು, ಅದೂ ಇನ್ನೊಂದು ಬೆಕ್ಕು ತನ್ನ ಜೊತೆಗಾರನಿಗೆ ಮನೆಯಲೆಲ್ಲ ಹುಡುಕುತ್ತಿರುವ ಕೂಗು.