Tuesday, September 28, 2010


ಜೀವನದಲ್ಲಿ ಕೆಲವು ಮುಖ್ಯ  ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದಾಗ ನಮಗೆ ಒಂದಕ್ಕಿಂತ ಹೆಚ್ಚು ದಾರಿಗಳು ಎದುರಾಗುತ್ತವೆ. ಆ ಸಮಯದಲ್ಲಿ ಯಾವ ದಾರಿಯಲ್ಲಿ ಹೋಗಬೇಕು ಎಂದು ತಿಳಿಯುವುದಿಲ್ಲ. ಕೊನೆಗೆ ಒಂದು ದಾರಿಯನ್ನು ಹಿಡಿದು ಅದರಲ್ಲಿ ಮುಂದುವರಿಯುತ್ತೇವೆ. ಸ್ವಲ್ಪ ದಿನಗಳ ನಂತರ ನಾವು ಹಾಗೆ ಯೋಚಿಸಿದರೆ ಆ ಇನ್ನೊಂದು ದಾರಿಯಲ್ಲಿ ಹೋಗಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಯು ನಮ್ಮನ್ನು ಕಾಡುತ್ತದೆ. ಇಂತಹ ಜಿಜ್ನಾಸೆಗೆ ತಳ್ಳುವ ದಾರಿಗಳೆ ಕವಲುದಾರಿಗಳು.            


ಆಯುರ್ವೇದದ ಪರಿಣಾಮ:
ತೀರ್ಥಹಳ್ಳಿಯಲ್ಲಿ ಡಾ||ಜೀವಂಧರ್ ಜೈನ್ ಎಂಬ ಒಳ್ಳೆಯ ಹಾಗು ಹೆಸರುವಾಸಿಯಾದ   ಆಯುರ್ವೇದದ ವೈದ್ಯರಿದ್ದಾರೆ. ಅವರಲ್ಲಿ ಚಿಕಿತ್ಸೆಗಾಗಿ ದೂರದ ಊರುಗಳಿಂದ ಹಲವಾರು ಜನರು ಬರುತ್ತಾರೆ. ನಾವು ಅವರ ಹತ್ತಿರ ತುಂಬಾ ವರುಷಗಳಿಂದ ಹೋಗುತ್ತಿದ್ದೇವೆ. ಹಾಗೆ ಒಮ್ಮೆ ಹೋದಾಗ ನಡೆದ ಘಟನೆಯಿದು. 
ಡಾಕ್ಟರ್ ನಮ್ಮ ಪರೀಕ್ಷೆಯನ್ನು ಮಾಡುತ್ತಿದ್ದರು, ಅದೇ ಸಮಯದಲ್ಲಿ ಅದೇ ಊರಿನ 75 ರಿಂದ 80 ವರುಷದ ಮುದುಕರೊಬ್ಬರು ಬಂದರು. ಅವರು ಡಾಕ್ಟರಿಗೆ ಹಲವು ವರುಷಗಳಿಂದ ಪರಿಚಯ. ಹಿಂದಿನ ಸಲ ಬಂದಾಗ ಟಾನಿಕ್ ಮತ್ತು ತೈಲವನ್ನು ತೆಗೆದುಕೊಂಡು ಹೋಗಿದ್ದರಂತೆ. ಒಳಗೆ ಬಂದ ತಕ್ಷಣ ಅವರು " ಡಾಕ್ಟ್ರೆ, ನೀವು ಕೊಟ್ಟ ಟಾನಿಕ್ ಕಾರ್ಕೊಟಕ ವಿಷದ ಥರ ಕಹಿ ಇದೆ, ಮತ್ತು ತೈಲ ತುಂಬಾ ಅಂಟು ಅಂಟಾಗಿದೆ, ಖಾಯಿಲೆ ಸ್ವಲ್ಪ ವಾಸಿಯಾಗಿದೆ" ಎಂದು ಹೇಳಿದರು. ಅವರ ಮಾತಿಗೆ ಡಾಕ್ಟರ್ "ಇಲ್ಲವಲ್ಲ ಅದು ಸಾಧ್ಯವಿಲ್ಲ, ಟಾನಿಕ್ ತುಂಬಾ ಸಿಹಿಯಾಗಿರಬೇಕಲ್ಲ?" ಎಂದು ಹೇಳಿದರು. 
ಆಮೇಲೆ ಆ ಮುದುಕರು ತೆಗೆದುಕೊಂಡ ಬಾಟಲಿಗಳನ್ನು ನೋಡಿ, ಒಂದು ತಕ್ಷಣ ಪೇಚಿಗೆ ಗುರಿಯಾದರು. ಆ ಮುದುಕರು ಕುಡಿಯುವ ತೈಲವನ್ನು ಮೈಗೆ ಮತ್ತು ಮೈಗೆ ಹಚ್ಚುವ ತೈಲವನ್ನು ಕುಡಿದಿದ್ದರು. ಇಷ್ಟಾದರು ಅ ಮುದುಕರಿಗೆ ಏನೂ ತೊಂದರೆ ಆಗಿತ್ತಿಲ್ಲ, ಅದೇ ಇಂಗ್ಲೀಷ್ ಔಷದಿಯಾಗಿದ್ದರೆ ಅವರ ಗತಿ ಅಧೋಗತಿಯೆ ಸರಿ. ಆ ಮುದುಕರು ಹೋದ ಮೇಲೆ ನಾವು ಬಿದ್ದು ಬಿದ್ದು ನಗಾಡಿದ್ದೆ ಸರಿ, ಅದಕ್ಕೆ ಡಾಕ್ಟರ್ " ನೋಡಿ, ತಪ್ಪು ತಪ್ಪಾಗಿ ತೆಗೆದುಕೊಂಡರು, ಆಯುರ್ವೇದ ಔಷಧ ಅಡ್ಡ ಪರಿಣಾಮವನ್ನು ಮಾಡಿಲ್ಲ" ಎಂದರು.

ಕೊನೆಹನಿ: ನಿದ್ದೆ ಮಾಡುತ್ತಿರುವವರನ್ನು ಸುಲಭವಾಗಿ ಎಬ್ಬಿಸಬಹುದು ಆದರೆ ನಿದ್ದೆ ಮಾಡುತ್ತಿರುವಂತೆ ಇರುವವರನ್ನು ಸುಲಭವಾಗಿ ಎಬ್ಬಿಸಲಾಗದು.

Tuesday, September 21, 2010

 September 18, 2010               ನೆನ್ನೆ ರಾತ್ರಿ ಎಂದಿನಂತೆ ಆಫೀಸಿನಿಂದ 45G ಬಸ್ ಹಿಡಿದು ಮನೆಗೆ ಹೊರಟೆ, ಸಮಯ 9:45PM ಆಗಿತ್ತು. ಕತ್ರಿಗುಪ್ಪೆ ಸ್ಟಾಪ್ ಬರುವುದರಲಿತ್ತು. ಅದರ ಹಿಂದಿನ ಸ್ಟಾಪ್ ಹತ್ತಿರ ರಾಜಸ್ಥಾನ ಮೂಲದ ತಾಯಿ ಮತ್ತು ಮಗಳು ಕೋರಮಂಗಲದ ಬಸ್ಸಿಗಾಗಿ ಕಾಯುತ್ತಿದ್ದರು. ಈ ಬಸ್ಸು ನಿಂತ ಕೂಡಲೆ ಅವರು ಇದು ಕೋರಮಂಗಲ ಹೋಗುತ್ತಾ ಅಂತ ಕೇಳಿದರು. ಬಸ್ಸ್ ಡ್ರೈವರ್ ಹೌದು ಎಂದು ಅವರನ್ನು ಹತ್ತಿಸಿಕೊಂಡರು. ಆದರೆ ಅದರ ಕೊನೆ ಸ್ಟಾಪ್ ಕಾಮಕ್ಯ ಆಗಿತ್ತು. ನಾವು ಡ್ರೈವರ್ ಗೆ ಇದು ಕೋರಮಂಗಲ ಹೋಗುವುದಿಲ್ಲವಲ್ಲ ಎಂದು ಕೇಳಿದೆವು.
           ಈ ಮಾತಿಗೆ ಆತನು ಕೊಟ್ಟ ಉತ್ತರ ನಿಜವಾಗಲು ಅರ್ಥಪೂರ್ಣವಾಗಿತ್ತು. " ಇವರು ಬೇರೆ ಕಡೆಯವರು, ಈಗಾಗಲೆ ಸಮಯ ಬಹಳ ಆಗಿದೆ, ಇವರಿಗೆ ಕೋರಮಂಗಲದ ದಾರಿ ಮತ್ತು ಬಸ್ಸು ಗೊತ್ತಿಲ್ಲ. ಹೀಗೆ ನಿಂತಿದ್ದರೆ ಇಲ್ಲೆ ಉಳಿದುಬಿಡುತ್ತಾರೆ, ಅದರ ಬದಲು ಕಾಮಕ್ಯ ಬಸ್ಸ ಡಿಪೋ ಹತ್ತಿರ ಬಿಟ್ಟರೆ ಹೇಗೋ ಹೋಗುತ್ತಾರೆ, ಟಿಕೆಟ್ಟು ಏನು ಬೇಡ " ಎಂದನು. ಡ್ರೈವರ್ ನ ಈ ಮಾತಿಗೆ ಅವನ ಹತ್ತಿರ ಇದ್ದ ಜನ ಅವನಿಗೆ ವಂದಿಸಿ ಹೊರಟರು. ಈ ಕಾಲದಲ್ಲು ಅದು ಬೆಂಗಳೂರಲ್ಲಿ ಅಪರೂಪಕ್ಕೆ ಇಂಥ ಜನ ಕಾಣಸಿಗುತ್ತಾರೆ ಎಂದು ಮನಸ್ಸಿನಲ್ಲಿ ಅಂದುಕೊಂಡು ನನ್ನ ಸ್ಟಾಪ್ ಇಳಿದುಕೊಂಡೆ.